ಯಾಕೆ ಚಿಂತಿಸುತಿದ್ದಿ ಕೋತಿಮನವೆ
ರಾಗ: ಭೈರವಿ,        ತಾಳ: ಝಂಪೆ
ಯಾಕೆ ಚಿಂತಿಸುತಿದ್ದಿ ಕೋತಿಮನವೆ
ಲೋಕನಾಥನ ನೆನೆದು ಸುಖಿಯಾಗು ಮನವೆ || ಪ||

ಹುಟ್ಟುವಾಗಾಪತ್ತಿಗಾರು ಚಿಂತಿಸಿದವರು
ಕಟ್ಟಕಡೆಯಲಿ ಲಯಕೆ ಯಾರ ಚಿಂತೆ
ನಟ್ಟನಡುವಿನ ಬಾಳಿಗೇಕೆ ಚಿಂತಿಸುತಿರುವೆ
ಹುಟ್ಟಿದವರಿಗೆ ಮೂರು ಬಟ್ಟಿಲ್ಲವೆ ಮರುಳೆ  || ೨ ||

ನವಿಲಿಗೆ ಚಿತ್ರಪತ್ರವನಾರು ಬರೆದವರು
ಪವಳದ ಲತೆಗೆ ಕೆಂಪಿಟ್ಟವರು ಯಾರು
ಸವಿಮಾತಿನರಗಿಣಿಗೆ ಹಸುರು ಬಳಿದವರಾರು
ಅವ ಮಾಡಿದವ ನಮ್ಮ ಮರೆತಿಹನೆ ಮರುಳೆ || ೩ ||

ಬಸುರೊಳಗೆ ಶಿಶುವನು ಅದಾರು ಸಲಹಿದವರು
ವಸುಧೆಯನು ಬಸುರೊಳಗೆ ಇಟ್ಟವರು ಯಾರು
ಹಸಗೆಡದೆ ನಮ್ಮ ಶ್ರೀ ಪುರಂದರವಿಠಲನ
ಬಿಸಜಪಾದವ ನಂಬಿ ಸುಖಿಯಾಗು ಮರುಳೆ || ೪ || ದಾಸವಾಣಿ
ರಚನೆ:- ಪುರಂದರದಾಸರು.
ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ

ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ